ಕೊಪ್ಪಳ ಜನವರಿ 05: ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ವಿಶ್ವಾಸಾರ್ಹ, ಸುರಕ್ಷಿತ ಮತ್ತು ಸುವ್ಯವಸ್ಥಿತ ಸಂಪರ್ಕ ಒದಗಿಸುವುದು ಕೇಂದ್ರ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮಾನ್ಯ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವರಾದ ವಿ. ಸೋಮಣ್ಣ ಅವರು ಹೇಳಿದರು.

ಸೋಮವಾರದಂದು ಗಿಣಿಗೇರಾ–ಮುನಿರಾಬಾದ್ ರೈಲು ನಿಲ್ದಾಣಗಳ ನಡುವಿನ ಎಲ್ಸಿ ಸಂಖ್ಯೆ 77 (ಹಿಟ್ನಾಳ) ರ ಬದಲಾಗಿ ನಿರ್ಮಾಣಗೊಳ್ಳಲಿರುವ ರಸ್ತೆ ಮೇಲ್ಸೇತುವೆ (ROB) ಕಾಮಗಾರಿಗೆ ಹಿಟ್ನಾಳದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ರೈಲು ಹಳಿ ದಾಟುವಾಗ ಜನರು ಮತ್ತು ವಾಹನಗಳು ಎದುರಿಸುವ ಅಪಾಯಗಳನ್ನು ಶಾಶ್ವತವಾಗಿ ನಿವಾರಿಸುವ ಉದ್ದೇಶದಿಂದ ಎಲ್ಸಿ ಸಂಖ್ಯೆ 77ರ ಬದಲಾಗಿ ರಸ್ತೆ ಮೇಲ್ಸೇತುವೆ ನಿರ್ಮಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಮಯ ಉಳಿಯುವುದರ ಜೊತೆಗೆ ಅಪಘಾತಗಳ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ. ಪ್ರ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಾದ್ಯಂತ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ರೈಲ್ವೆ ಹಾಗೂ ರಸ್ತೆ ಸಂಪರ್ಕವನ್ನು ಸಮನ್ವಯಗೊಳಿಸಿ ಜನಸಾಮಾನ್ಯರ ಜೀವನ ಸುಗಮಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.
ಹಿಟ್ನಾಳ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ಈ ರಸ್ತೆ ಮೇಲ್ಸೇತುವೆ ಮಹತ್ವದ ವರದಾನವಾಗಿದ್ದು, ಕೃಷಿ ಉತ್ಪನ್ನಗಳ ಸಾಗಣೆ, ಶಿಕ್ಷಣ, ಆರೋಗ್ಯ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಗುಣಮಟ್ಟದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದ ಸಚಿವರು, ಅಭಿವೃದ್ಧಿ ಕೆಲಸಗಳು ಜನರಿಗೆ ನಿಜವಾದ ಲಾಭ ತಲುಪುವಂತೆ ಜವಾಬ್ದಾರಿಯಿಂದ ನಡೆಯಬೇಕು ಎಂದು ಹೇಳಿದರು.

*ರೈಲ್ವೇ ಮೇಲ್ಸೆತುವೆ ಕಾಮಗಾರಿಯ ವಿವರ:*
ರಾಜ್ಯ ಸರ್ಕಾರ ಹಾಗೂ ರೈಲ್ವೆಗಳ ಸಂಯುಕ್ತವಾಗಿ ಅನುಮೋದಿತ ಸಾಮಾನ್ಯ ವಿನ್ಯಾಸ ಚಿತ್ರ ಆಧಾರದ ಮೇಲೆ, ಎಲ್ಸಿ ಸಂಖ್ಯೆ 77ರ ಬದಲಿಗೆ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ದಿನಾಂಕ: 12.09.2024 ರಂದು ಶೇ.100 ರೈಲ್ವೆ ವೆಚ್ಚದಲ್ಲಿ ಅನುಮೋದನೆ ನೀಡಲಾಗಿದ್ದು, ಯೋಜನೆಯ ಅನುಮೋದಿತ ವೆಚ್ಚ ರೂ. 26.97 ಕೋಟಿ ಆಗಿದೆ. ಈ ಯೋಜನೆ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯಲ್ಲಿ ಸ್ಥಿತವಾಗಿದ್ದು, ರಾಷ್ಟಿçÃಯ ಹೆದ್ದಾರಿ-67 ಮತ್ತು ಅಗಳಕೇರಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ ಹಾಗೂ ಕೊಪ್ಪಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಟ್ಟಿದೆ.
ಮಾರ್ಚ್ 2023ರ ಟಿವಿಯು ಅಂಕಿಅAಶಗಳ ಪ್ರಕಾರ, ಎಲ್ಸಿ ಸಂಖ್ಯೆ 77ರಲ್ಲಿ ದಿನಕ್ಕೆ 2,25,862 ವಾಹನ ಸಂಚಾರ ದಾಖಲಾಗಿದ್ದು, ಭಾರೀ ವಾಹನಗಳ ಸಂಚಾರ ಹೆಚ್ಚಿರುವ ಕಾರಣ ರೈಲು ಸಂಚಾರಕ್ಕೆ ಗೇಟ್ ಮುಚ್ಚಿದ ಸಮಯದಲ್ಲಿ ರಸ್ತೆ ಸಂಚಾರ ಗಂಟೆಗಳ ಕಾಲ ಸ್ಥಗಿತಗೊಳ್ಳುವ ಮೂಲಕ ಸಾರ್ವಜನಿಕರಿಗೆ ತೀವ್ರ ಅಸೌಕರ್ಯ ಉಂಟಾಗುತ್ತಿತ್ತು.
ಈ ಹಿನ್ನೆಲೆಯಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣದಿಂದ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗುವ ಜೊತೆಗೆ ರಸ್ತೆ-ರೈಲು ಸಂಚಾರ ಸುರಕ್ಷತೆ ಹೆಚ್ಚಳವಾಗಲಿದೆ. ಯೋಜನೆಯಡಿ 10.5 ಮೀಟರ್ ಅಗಲದ ಕ್ಯಾರೇಜ್ವೇ ಒದಗಿಸಲಾಗುತ್ತಿದ್ದು, ರೈಲ್ವೆ ಭಾಗ ಮತ್ತು ಅಪ್ರೋಚ್ಗಳಲ್ಲಿ ಒಂದು ಬದಿಯಲ್ಲಿ 1.5 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಒಳಗೊಂಡಿರುತ್ತದೆ. ಕಾಮಗಾರಿಗೆ ದಿನಾಂಕ: 08.02.2025 ರಂದು ಗುತ್ತಿಗೆ ನೀಡಲಾಗಿದ್ದು, ಮಣ್ಣಿನ ಪರಿಶೀಲನಾ ಕಾರ್ಯ ಈಗಾಗಲೇ ಪೂರ್ಣಗೊಂಡಿದೆ ಎಂದು ಸಚಿವರು ಹೇಳಿದರು.
